ಜೇಮ್ಸ್ (ಇಂಗ್ಲೆಂಡಿನ ದೊರೆಗಳು)
ಜೇಮ್ಸ್ I : 1566-1625. ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡಿನ ದೊರೆ (1603-1225), ಸ್ಕಾಟ್ಲಂಡಿನ 6ನೆಯ ಜೇಮ್ಸ (1567-1625). ಮೇರಿ ಸ್ಟೂಯರ್ಟ್ ಮತ್ತು ಹೆನ್ರಿ ಸ್ಟೀವರ್ಟರ ಮಗ. ತಂದೆಯ ಕೊಲೆ ಮತ್ತು ತಾಯಿಯ ಸಿಂಹಾಸನತ್ಯಾಗ ಆದಾಗ ಇವನು ಸ್ಕಾಟ್ಲೆಂಡಿನ ದೊರೆಯೆಂದು ಘೋಷಿತನಾದ. ಇವನು ಪ್ರಾಪ್ತ ವಯಸ್ಕನಾಗಿರಲಿಲ್ಲವಾದ್ದರಿಂದ ರೀಜೆಂಟರು ಆಡಳಿತ ನಡೆಸುತ್ತಿದ್ದರು. ಇವನಿಗೆ ಒಳ್ಳೆಯ ಶಿಕ್ಷಣ ದೊರಕಿತು. 12ನೆಯ ವಯಸ್ಸಿಗೆ ಮುಂಚೆಯೇ ಇವನು ಅಡಳಿತಸೂತ್ರವನ್ನು ವಹಿಸಿಕೊಂಡರೂ ಆಮೇಲೂ ಹಲವು ವರ್ಷ ಇವನು ಮಹಾತ್ತ್ವಾಕಾಂಕ್ಷಿಗಳ ಕೈಗೊಂಬೆಯಂತಿದ್ದ. ಆದರೆ ಶ್ರೀಮಂತರ ಮತ್ತು ಪಕ್ಷಗಳ ಹಿಡಿತದಿಂದ ತಪ್ಪಿಸಿಕೊಂಡು ನೇರವಾಗಿ ಆಡಳಿತ ನಡೆಸುವುದು ಮತ್ತು ಇಂಗ್ಲೆಂಡಿನ ರಾಣಿ 1ನೆಯ ಎಲಿಜóಬೆತಳ ಅನಂತರ ಆ ರಾಜ್ಯದ ದೊರೆಯಾಗುವುದು ಇವನ ಧ್ಯೇಯವಾಗಿತ್ತು. ಇವನು ಇಂಗ್ಲೆಂಡಿನ ದೊರೆ 7ನೆಯ ಹೆನ್ರಿಯ ಮಗಳ ಮರಿ ಮಗ. ಮಂತ್ರಿಮಂಡಳದ ನೆರವಿನೊಂದಿಗೆ ತನ್ನ ಗುರಿ ಸಾಧಿಸಿ ರಾಜ್ಯವಾಳಿದ.

	1ನೆಯ ಎಲಿಜóಬೆತ್ ಮರಣಹೊಂದಿದಾಗ (1603) ಜೇಮ್ಸನಿಗೆ ಇಂಗ್ಲೆಂಡಿನ ಸಿಂಹಾಸನವೂ ಪ್ರಾಪ್ತವಾಯಿತು. 1603ರಿಂದ 1625ರವರೆಗೆ ಇವನು ರಾಜ್ಯವಾಳಿದ. ಇಂಗ್ಲೆಂಡಿನಲ್ಲಿ ಟ್ಯೂಡರ್ ಮನೆತನದ ಕಾಲ ಮುಗಿದು ಸ್ಟೂಯರ್ಟ್ ಮನೆತನದ ಆಡಳಿತ ಪ್ರಾರಂಭವಾಯಿತು. ಇಂಗ್ಲೆಂಡ್. ಸ್ಕಾಟ್ಲೆಂಡ್-ಈ ಎರಡು ಸ್ವತಂತ್ರ ರಾಷ್ಟ್ರಗಳೂ ಒಂದುಗೂಡಿ ಜೇಮ್ಸನ ಆಳ್ವಿಕೆಗೆ ಒಳಪಟ್ಟುವು. ಇದು ಕೇವಲ ವೈಯಕ್ತಿಕ ಒಕ್ಕೂಟವಾದರೂ, ಆ ರಾಜ್ಯಗಳ ಮಧ್ಯೆ ಇದ್ದ ವೈಷಮ್ಯಗಳು ತಾತ್ಕಾಲಿಕವಾಗಿ ಮಾಯವಾದುವು. ಆದಾಗ್ಯೂ ಇಂಗ್ಲೆಂಡಿನ ರಾಜಕೀಯ ಮತ್ತು ಧಾರ್ಮಿಕ ಸಮಸ್ಯೆಗಳು ಉಲ್ಬಣಗೊಂಡು 17ನೆಯ ಶತಮಾನದಲ್ಲಿ ರಾಜತ್ವ ಮತ್ತು ಪಾರ್ಲಿಮೆಂಟಿನ ನಡುವೆ ಭಿನ್ನಾಭಿಪ್ರಾಯ ಹೆಚ್ಚಿ ಘರ್ಷಣೆ ಉಂಟಾಯಿತು.

	1ನೆಯ ಜೇಮ್ಸ್ ಇಂಗ್ಲೆಂಡಿನ ರಾಜನಾದಾಗ ಅಲ್ಲಿಯ ಜನ ಅವನ ಆಡಳಿತದ ಬಗ್ಗೆ ಆಶಾಭಾವನೆ ಹೊಂದಿದ್ದರು. ಪ್ಯೂರಿಟನರು ಎಲಿಜಬೆತ್ ಕಾಲದಲ್ಲಿ ಪಡೆಯಲಾಗದ ಧಾರ್ಮಿಕ ಸ್ವಾತಂತ್ರ್ಯವನ್ನು ಜೇಮ್ಸನ ಕಾಲದಲ್ಲಿ ಪಡೆಯುವ ಆಸೆ ಹೊಂದಿದ್ದರು. ಜೇಮ್ಸನ ಆಳ್ವಿಕೆ ಪ್ರಗತಿಯ ಹಾದಿಯಲ್ಲಿ ನಡಯುವುದೆಂಬ ಭಾವನೆ ಮಧ್ಯಮವರ್ಗದ ಜನರಲ್ಲಿತ್ತು. ಪಾರ್ಲಿಮೆಂಟ್ ಸಹ ಅವನ ರಾಜ್ಯಾಡಳಿತ ವಿಚಾರದಲ್ಲಿ ಆಶಾಭಾವನೆ ಹೊಂದಿತ್ತು. ಹೀಗಾಗಿ ರಾಷ್ಟ್ರದ ಎಲ್ಲ ವರ್ಗಗಳ ಜನರೂ ಕುತೂಹಲದಿಂದ, ಆಶಾಭಾವನೆಯಿಂದ ಅವನನ್ನು ಸ್ವಾಗತಿಸಿದ್ದರು. ಆದರೆ ಈ ಎಲ್ಲ ಭಾವನೆಗಳಿಗೂ ಪ್ರತಿಕೂಲವಾದ ನೀತಿಯನ್ನು ಅನುಸರಿಸಿ, ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವನು ಪ್ರಜೆಗಳ ವೈರ ಕಟ್ಟಿಕೊಂಡ.

	ಪ್ರಾರಂಭದಲ್ಲಿ ಜೇಮ್ಸನ ಆಳ್ವಿಕೆ ಫಲಪ್ರದವಾಗುವ ಸನ್ನಿವೇಶಗಳೆಲ್ಲ ಇದ್ದುವು. ರಾಜ್ಯದಲ್ಲಿ ಸಂಪತ್ತಿಗೆ ಅಭಾವವಿರಲಿಲ್ಲ. ಸ್ಪೇನಿನೊಡನೆ ನಡೆಸುತ್ತಿದ್ದ ಯುದ್ದವನ್ನು ಅವನು ಕೊನೆಗೊಳಿಸಿ, ದೇಶದಲ್ಲಿ ಶಾಂತಿ ಸ್ಥಾಪಿಸಿದ. ಗಡಿಪ್ರದೇಶದ ಸಮಸ್ಯೆಗಳನ್ನು ನಿವಾರಿಸಿದ. ಸ್ಕಾಟ್ಲೆಂಡಿನಾದ್ಯಂತ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಅಲ್ಲಿಯ ಪ್ರಗತಿಗೆ ಕಾರಣನಾದ. ಆದರೆ ಅವನ ಧಾರ್ಮಿಕ ನೀತಿ ರಾಷ್ಟ್ರದ ಎರಡು ಭಾಗಗಳಲ್ಲೂ ವಿಫಲಗೊಂಡಿತು. ಉತ್ತಮ ರಾಜ್ಯಭಾರ ಮಾಡುವ ಅವಕಾಶವನ್ನು ಅವನು ಕಳೆದುಕೊಂಡ.

	ಜೇಮ್ಸ್ ಇಂಗ್ಲೆಂಡಿನ ಆಡಳಿತ ಸೂತ್ರ ವಹಿಸಿಕೊಂಡ ಕೆಲವು ದಿನಗಳಲ್ಲಿ ಪ್ರಥಮವಾಗಿ ಸಮಾವೇಶಗೊಂಡ ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ತಾನು ಅನುಭವ ಹೊಂದಿದ ದೊರೆ ಎಂದು ಹೇಳಿದ. ಆದರೆ ಆ ಅನುಭವವಾಗಲಿ ಅವನು ಪ್ರತಿಪಾದಿಸಿದ ಸಿದ್ಧಾಂತವಾಗಲಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಯಾವ ಸಹಾಯವನ್ನೂ ಮಾಡಲಿಲ್ಲ. ಅಲ್ಲದೆ ಅವನ ಧೋರಣೆಯೂ ಸರಿಯಾಗಿರಲಿಲ್ಲ. ಆದ್ದರಿಂದ ಅವನ ಆಳ್ವಿಕೆ ಸ್ಟೂಯರ್ಟ್ ಮನೆತನಕ್ಕೆ ಹಾನಿಯುಂಟುಮಾಡಿತು.

	ಪ್ರಥಮ ಅಧಿವೇಶನದಲ್ಲೇ ಜೇಮ್ಸ್ ಪಾರ್ಲಿಮೆಂಟಿನ ವೈರವನ್ನು ಕಟ್ಟಿಕೊಂಡ. 17ನೆಯ ಶತಮಾನದ ಪ್ರಾರಂಭದಲ್ಲಿ ಪಾರ್ಲಿಮೆಂಟ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ದೇಶದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಲು ಸನ್ನದ್ದವಾಗಿತ್ತು. ಸ್ಕಾಟ್ಲೆಂಡಿನಲ್ಲಿ ಪಾರ್ಲಿಮೆಂಟಿನಲ್ಲಿ ಪಕ್ಷಗಳನ್ನು ಸೃಷ್ಟಿಸಿ, ಭಿನ್ನಾಬಿಪ್ರಾಯಗಳನ್ನು ಮೂಡಿಸಿ, ಅದರ ಮೇಲೆ ತನ್ನ ಅಧಿಕಾರ ಸ್ಥಾಪಿಸಿದಂತೆ, ಇಂಗ್ಲೆಂಡಿನ ಪಾರ್ಲಿಮೆಂಟಿನ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದರಲ್ಲಿ ಜೇಮ್ಸ್ ವಿಫಲನಾದ. ಧರ್ಮಶಾಸ್ತ್ರದಲ್ಲಿ ಪಂಡಿತನೆನಿಸಿಕೊಂಡ ಜೇಮ್ಸ್ ಪಾರ್ಲಿಮೆಂಟಿನ ಅಧಿವೇಶನದಲ್ಲಿ ತನ್ನ ಪರಮಾಧಿಕಾರದ ವಿಚಾರದಲ್ಲಿ ದೀರ್ಘ ಭಾಷಣ ಮಾಡಿ, ಸದಸ್ಯರ ಹಕ್ಕುಗಳು ಆಜನ್ಮಸಿದ್ದವಲ್ಲವೆಂದೂ ಅವು ತನ್ನಿಂದ ಕೊಡಲ್ಪಟ್ಟವೆಂದೂ ತನಗೆ ಇಷ್ಟಬಂದಾಗ ಅವನ್ನು ಕಸಿದುಕೊಳ್ಳುವ ಅಧಿಕಾರ ತನಗೆ ಉಂಟೆಂದೂ ವಾದ ಮಾಡಿದಾಗ ಕಾಮನ್ಸ್ ಸಭೆಯ ಸದಸ್ಯರು 1604ರಲ್ಲಿ ದಿ ಅಪಾಲೊಜಿ ಆಫ್ ದಿ ಕಾಮನ್ಸ್ ಎಂಬ ಪತ್ರವನ್ನು ತಯಾರು ಮಾಡಿ, ಅದರಲ್ಲಿ ತಮ್ಮ ಹಕ್ಕುಗಳನ್ನು ನಿರೂಪಿಸಿ, ಅವನ್ನು ಮೊಟಕು ಮಾಡುವುದಕ್ಕಾಗಲಿ ಕಸಿದುಕೊಳ್ಳುವುದಕ್ಕಾಗಲಿ ರಾಜನಿಗೆ ಯಾವ ಅಧಿಕಾರವೂ ಇಲ್ಲವೆಂದು ಪ್ರತಿಪಾದಿಸಿದರು. ಆದರೆ ಪಾರ್ಲಿಮೆಂಟನ್ನು ಕಡೆಗಣಿಸುವ ಉದ್ದೇಶ ಹೊಂದಿದ್ದ ಜೇಮ್ಸ್ ಅವರ ವಿಧೇಯಕಾಧಿಕಾರವನ್ನು ಕಡಿದುಹಾಕಿ, ಪಾರ್ಲಿಮೆಂಟ್ ತಳ್ಳಿಹಾಕಿದ ವಿಧೇಯಕವನ್ನು ಕಾನೂನೆಂದು ನ್ಯಾಯಾಲಯ ಫೋಷಿಸುವಂತೆ ಮಾಡಿದ. ಪಾರ್ಲಿಮೆಂಟಿನ ತೆರಿಗೆ ವಿಧಿಸುವ ಅಧಿಕಾರವನ್ನು ಕಸಿದುಕೊಳ್ಳಲು ಯತ್ನಿಸಿದ. ನ್ಯಾಯಾಂಗ ಕ್ಷೇತ್ರದಲ್ಲಿ ಬಹುಪಾಲು ನ್ಯಾಯಾಧಿಪತಿಗಳು ರಾಜನ ಸೇವಕರಂತೆ ನಡೆದುಕೊಂಡರು; ಆದರೆ ಎಡ್ವರ್ಡ್ ಕೋಕ್ ಎಂಬ ಜ್ಯೇಷ್ಠ ನ್ಯಾಯಾಧಿಪತಿ ರಾಜನಲ್ಲಿ ಭಯಭಕ್ತಿಯಿಟ್ಟಿದ್ದರೂ ರಾಜನ ಅತಿಕ್ರಮಗಳು ಅನುಚಿತವೆಂದು ವಾದಿಸಿದ. ಆತ್ಮಸಾಕ್ಷಿಯಂತೆ ನಡೆದುಕೊಂಡು ವಾದವಿವಾದಗಳನ್ನು ಕೇಳಿ, ನ್ಯಾಯಕ್ಕೆ ಅನುಸಾರವಾಗಿ ನಿರ್ಧಾರಗಳನ್ನು ನೀಡುವುದಾಗಿಯೂ ರಾಜನ ಬೆದರಿಕೆಗೆ ಜಗ್ಗುವುದಿಲ್ಲವೆಂದೂ ಹೇಳಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸಿದ. ತನ್ನ ಪದವಿಯನ್ನು ಕಳೆದುಕೊಂಡರೂ, ಕೋಕ್ ಒಂದು ತತ್ತ್ವಕ್ಕಾಗಿ ಹೋರಾಟ ನಡೆಸಿದವನೆಂದು ಪ್ರಸಿದ್ದನಾದ. ಪಾರ್ಲಿಮೆಂಟಿನ ಸದಸ್ಯನಾಗಿ, ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ, ಪ್ರಜೆಗಳ ಹಕ್ಕುಗಳನ್ನು, ಸ್ಥಾಪಿಸುವುದರಲ್ಲಿ ಸಹಾಯಕನಾದ.

	ರಾಜಕೀಯ ಕ್ಷೇತ್ರದಲ್ಲಿ ಪರಾಭವ ಹೊಂದಿದ ಜೇಮ್ಸ್ ಮತವಿಚಾರದಲ್ಲೂ ಸೂಲನ್ನನುಭವಿಸಬೇಕಾಯಿತು. ಅವನ ಮತೀಯ ನೀತಿ ಯಾವ ಪಕ್ಷಕ್ಕೂ ಸರಿಹೊಂದಲಿಲ್ಲ. ಮುಖ್ಯವಾಗಿ ಪ್ಯೂರಿಟನರಿಗೆ ಅವನ ಧೋರಣೆ ತೃಪ್ತಿ ತರಲಿಲ್ಲ, 1,000 ಮತೀಯ ಪ್ರತಿನಿಧಿಗಳು ಸೇರಿದ್ದ ಹ್ಯಾಂಪ್ಟನ್ ಕೋರ್ಟ್ ಸಭೆಯಲ್ಲಿ ಜೇಮ್ಸ್ ತನ್ನ ಮತೀಯ ನೀತಿಯನ್ನು ನಿರೂಪಿಸಿ, ಅದನ್ನು ಅನುಸರಿಸದವರನ್ನು ರಾಷ್ಟ್ರದಿಂದ ಹೊರದೂಡುವುದಾಗಿ ಬೆದರಿಕೆ ಹಾಕಿದಾಗ, ಪ್ಯೂರಿಟನರೂ ದೊರೆಯ ವಿರೋಧಿಗಳಾದರು. ಅಲ್ಲದೆ ಸುಮಾರು 10 ವರ್ಷಗಳ ಕಾಲ ಅವನು ಪಾರ್ಲಿಮೆಂಟನ್ನು ಕರೆಯದೆ ಅಧಿಕಾರವನ್ನು ಸ್ವೇಚ್ಛೆಯಾಗಿ ಚಲಾಯಿಸಿ, ಹಣ ಸಂಗ್ರಹಿಸಲು ಯತ್ನಿಸಿ, ಆ ಪ್ರಯತ್ನದಲ್ಲಿ ಜನತೆಯ ವಿಶ್ವಾಸವನ್ನು ಕಳೆದುಕೊಂಡ.

	ಜೇಮ್ಸನ ವಿದೇಶಾಂಗ ನೀತಿಯೂ ಜನಪ್ರಿಯವಾಗಿರಲಿಲ್ಲ. ಜೇಮ್ಸ್ ಶಾಂತಿಪ್ರಿಯ. ಆದರೆ ಯುದ್ಧ ಅನಿವಾರ್ಯವಾದಾಗ ಅದನ್ನು ಘೋಷಿಸಲು ಹಿಂಜರಿದ. ಸ್ಪೇನಿನ ಬಗ್ಗೆ ಅವನ ಧೋರಣೆ ಜನಪ್ರಿಯವಾಗಿರಲಿಲ್ಲ. ಈ ಕ್ಷೇತ್ರದಲ್ಲೂ ಕಾಮನ್ಸ್ ಸಭೆ ಅವನು ವಿದೇಶಾಂಗ ನೀತಿಯನ್ನು ಬಲವಾಗಿ ವಿರೋಧಿಸಿತು. 1621ರಲ್ಲಿ ಪಾರ್ಲಿಮೆಂಟ್ ಸಭೆ ಸೇರಿದಾಗ ಜೇಮ್ಸನ ವಿದೇಶಾಂಗ ನೀತಿಯನ್ನು ಅದು ಕಟುವಾಗಿ ಟೀಕಿಸಿತು. ಜೇಮ್ಸ್ ಕೋಪಗೊಂಡು ಸಭೆಯನ್ನು ವಿಸರ್ಜಿಸಿದ.
ಜೇಮ್ಸನ ಆಳ್ವಿಕೆಯ ಕಾಲದಲ್ಲಿ ಪಾರ್ಲಿಮೆಂಟ್ ನಾಲ್ಕು ಬಾರಿ ಸಮಾವೇಶಗೊಂಡಿತ್ತು. ನಾಲ್ಕನೆಯ ಅಧಿವೇಶನದಲ್ಲಿ ಮಾತ್ರ ರಾಜ ಮತ್ತು ಕಾಮನ್ಸ್ ಸಭೆಯ ನಡುವೆ ಸ್ನೇಹದ ವಾತಾವರಣವಿತ್ತೆಂದು ಹೇಳಬಹುದು. ಕಾಮನ್ಸ್ ಸಭೆಯ ಶಕ್ತಿಯನ್ನು ಮನಗಂಡ ಜೇಮ್ಸ್ ಅದರ ಅಭಿಪ್ರಾಯಗಳಿಗೆ ಮನ್ನಣೆ ಕೊಟ್ಟು ಅದರೊಡನೆ ಸಹಕರಿಸಿ ಸ್ನೇಹ ಸಂಪಾದಿಸಲು ಪ್ರಯತ್ನಿಸಿದ. ಅವನ ಮರಣದ ಸಮಯದಲ್ಲಿ ಆಳ್ವಿಕೆಯ ಕಹಿ ಮಾಯವಾಗಿ, ಸ್ವಲ್ಪಮಟ್ಟಿಗೆ ಒಳ್ಳೆಯ ವಾತಾವರಣವಿತ್ತು.

ಜೇಮ್ಸನ ಕಾಲದಲ್ಲಿ ಉದ್ಭವವಾದ ತೀವ್ರವಾದ ರಾಜಕೀಯ ಮತ್ತು ಮತೀಯ ಸಮಸ್ಯೆಗಳನ್ನು ಅವನ ಮಗ ಚಾಲ್ರ್ಸ್ ಎದುರಿಸಬೇಕಾಯಿತು. ವಿದ್ವಾಂಸನೆನಿಸಿಕೊಂಡ ಜೇಮ್ಸ್ ತನ್ನ ಬರವಣಿಗೆಗಳ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬ್ರಿಟನ್ನಿನ ರಾಜರಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸಿಕೊಂಡಿದ್ದಾನೆ. ದಿ ಟ್ರೂ ಲಾ ಆಫ್ ಫ್ರೀ ಮಾನಾರ್ಕೀಸ್ ಎಂಬ ಗ್ರಂಥದಲ್ಲಿ ರಾಜತ್ವದ ಸಿದ್ದಾಂತವನ್ನು ಪ್ರತಿಪಾದಿಸಿದ್ದಾನೆ. ಅಲ್ಲದೆ ಡೀಮನಾಲೊಜಿ ಎಂಬ ಪುಸ್ತಕದಲ್ಲಿ ದೆವ್ವಗಳ ಬಗ್ಗೆ ಜನರಿಗಿದ್ದ ಮೂಢನಂಬಿಕೆಯನ್ನು ಖಂಡಿಸಿದ್ದಾನೆ. ಈ ಗ್ರಂಥಗಳಲ್ಲದೆ ಅನೇಕ ಪದ್ಯ ಮತ್ತು ಗದ್ಯ ಪುಸ್ತಕಗಳನ್ನು ಬರೆದಿದ್ದಾನೆ. ಇಷ್ಟೆಲ್ಲ ಪಾಂಡಿತ್ಯ ಹೊಂದಿದ್ದರೂ ರಾಷ್ಟ್ರದ ಆಡಳಿತದಲ್ಲಿ ಒಳ್ಳೆಯ ಹೆಸರನ್ನು ಗಳಿಸಲಾರದೆ ಹೋಗಿ ಕ್ರೈಸ್ತ ಪ್ರಪಂಚದ ಶುಂಠಪಂಡಿತ ಎನಿಸಿಕೊಂಡಿದ್ದಾನೆ.

	ಜೇಮ್ಸ್ II : 1633-1701. 1ನೆಯ ಚಾಲ್ರ್ಸನ ಕೊನೆಯ ಮಗ. 1685 ರಿಂದ 1688ರವರೆಗೆ ಬ್ರಿಟನಿನ ದೊರೆ. ಅಣ್ಣ 2ನೆಯ ಚಾಲ್ರ್ಸನ ಅನಂತರ ರಾಜನಾದ. 1634ರಲ್ಲಿ ಡ್ಯೂಕ್ ಆಫ್ ಯಾರ್ಕ್ ಪದವಿ ಪಡೆದ. ಬ್ರಿಟನಿನ ಅಂತರ್ಯುದ್ಧದ ಕಾಲದಲ್ಲಿ 1642ರಿಂದ 1646ರವರೆಗೆ ಆಕ್ಸ್‍ಫರ್ಡ್ ಪಟ್ಟಣದಲ್ಲಿ ವಾಸವಾಗಿದ್ದ. 1648ರಲ್ಲಿ ದೇಶದಿಂದ ತಪ್ಪಿಸಿಕೊಂಡು ನೆದರ್‍ಲೆಂಡಿಗೆ ಹೋದ. ಬ್ರಿಟನ್ನಿನಲ್ಲಿ ರಾಜತ್ವ 1660ರಲ್ಲಿ ಪುನಃ ಅಸ್ತಿತ್ವಕ್ಕೆ ಬಂದಾಗ, ಜೇಮ್ಸ್ ದೇಶದ ನೌಕಾಬಲದ ಅಧಿಪತಿಯಾದ. ಆ ಕಾಲದಲ್ಲಿ ವಸಾಹತುಗಳ ಸ್ಥಾಪನೆಯಲ್ಲಿ ವಿಶೇಷ ಆಸಕ್ತಿ ತೋರಿಸಿದ. 1665ರಲ್ಲಿ ನಡೆದ ಡಚ್ ಯುದ್ಧದಲ್ಲಿ ನೌಕಾಬಲದ ನಾಯಕನಾಗಿದ್ದ. ಜೇಮ್ಸ್ 1669ರಲ್ಲಿ ರೋಮನ್ ಕ್ಯಾತೊಲಿಕ್ ಪಂಥಕ್ಕೆ ಸೇರಿದರೂ ಅವನಿಗೆ ಬ್ರಿಟನಿನ ಆಂಗ್ಲಿಕನ್ ಚರ್ಚಿನಲ್ಲಿ ಸಹಾನುಭೂತಿಯಿತ್ತು. ಅವನ ಮತೀಯ ದೃಷ್ಟಿ ಅವನ ರಾಜಕೀಯ ಅಭಿಪ್ರಾಯಗಳ ಮೇಲೆ ಯಾವ ಪ್ರಭಾವವನ್ನೂ ಬೀರಿರಲಿಲ್ಲ.

	ಆದರೆ 1673ರ ತರುವಾಯ ಜೇಮ್ಸ್‍ನ ಮತೀಯ ಧೋರಣೆ ಸ್ಪಷ್ಟವಾಯಿತು. ಪ್ರಾಟೆಸ್ಟಂಟ್ ಕಾಮನ್ಸ್ ಸಭೆ, ಕ್ಯಾತೊಲಿಕ್ ಪಂಥದ ವಿರೋಧಿಯಾಗಿದ್ದು, ಟೆಸ್ಟ್ ಆಕ್ಟ್ ಎಂಬ ಅಧಿನಿಯಮದ ಮೂಲಕ ಕ್ಯಾತೊಲಿಕರನ್ನು ನಿರ್ಬಂಧಗೊಳಿಸಿದಾಗ, ಜೇಮ್ಸ್ ತಾನು ಅನುಭವಿಸುತ್ತಿದ್ದ ಎಲ್ಲ ಪದವಿಗಳಿಗೂ ರಾಜೀನಾಮೆ ಇತ್ತು. ತಾನು ಕ್ಯಾತೊಲಿಕ್ ರಾಜಕುಮಾರಿಯನ್ನು ಮದುವೆಯಾದಾಗ ಅವನ ಮತಪರಿವರ್ತನೆ ದೃಢಪಟ್ಟಿತು. ಸಿಂಹಾಸನಕ್ಕೆ ಜೇಮ್ಸ್ ಉತ್ತರಾಧಿಕಾರಿಯಾಗದಂತೆ ತಡೆಯಲು ಪಾರ್ಲಿಮೆಂಟ್ 1679ರಿಂದ 1681ರವರೆಗೆ ಮೂರು ಬಾರಿ ಸಭೆ ಸೇರಿ ಅದರ ಬಗ್ಗೆ ನಿರ್ಧಾರ ಕೈಗೊಳ್ಳಲು ವಿಶೇಷವಾಗಿ ಶ್ರಮಪಟ್ಟಿತು. ಆದರೆ 1685ರಲ್ಲಿ 2ನೆಯ ಚಾಲ್ರ್ಸ್ ಸತ್ತಾಗ ಜೇಮ್ಸ್ ಪಟ್ಟಕ್ಕೆ ಬರುವುದರಲ್ಲಿ ಯಾವ ತೊಂದರೆಯೂ ಆಗಲಿಲ್ಲ. 1685ರಲ್ಲಿ ಸಭೆ ಸೇರಿದ ಪಾರ್ಲಿಮೆಂಟ್ ರಾಜನ ಪರವಾಗಿತ್ತು. ಮಾನ್‍ಮತ್‍ನ ಡ್ಯೂಕ್ ದೇಶದ ಉತ್ತರಭಾಗದಲ್ಲಿ ಜೇಮ್ಸನ ವಿರುದ್ಧ ಬಂಡಾಯ ಎಬ್ಬಿಸಿದ. ಆದರೆ ಪಾರ್ಲಿಮಂಟಿನ ಬೆಂಬೆಲದಿಂದ ಮತ್ತು ಸೈನ್ಯದ ಸಹಾಯದಿಂದ ಆ ದಂಗೆಯನ್ನು ಜೇಮ್ಸ್ ಅಡಗಿಸಿದ. ಬಂಡಾಯಗಾರರ ಮೇಲೆ ಪ್ರತೀಕಾರ ಕ್ರಮ ಕೈಗೊಳ್ಳುವ ಸಲುವಾಗಿ ಜೆಫ್ರಿನ್ ಎಂಬವನ ನೇತೃತ್ವದಲ್ಲಿ ನ್ಯಾಯಾಲಯವನ್ನು ಸ್ಥಾಪಿಸಿ, ಅನೇಕರನ್ನು ಗಲ್ಲಿಗೇರಿಸಿದ. ಮಾನ್‍ಮತ್ ಡ್ಯೂಕನ ಜೀವವೂ ಅಂತ್ಯಗೊಂಡಿತು. ದೇಶದ ರಕ್ಷಣೆಗಾಗಿ ಸೈನ್ಯವನ್ನು ಹೆಚ್ಚಿಸಿ ಹೊಸ ಸೈನಿಕ ತಂಡಗಳಿಗೆ ರೋಮನ್ ಕ್ಯಾತೊಲಿಕ್ ಅಧಿಕಾರಿಗಳನ್ನು ನೇಮಿಸಿದ. ಇದರಿಂದ ಪಾರ್ಲಿಮೆಂಟ್ ಕೋಪಗೊಂಡಿತು. ದೊರೆಗೂ ಪಾರ್ಲಿಮೆಂಟಿಗೂ ವಿರಸ ಉಂಟಾಯಿತು. ಜೇಮ್ಸ್ ಪಾರ್ಲಿಮೆಂಟನ್ನೇ ಮುಂತಳ್ಳಿದ (1685).

	ರಾಜ್ಯದಲ್ಲಿ ಕ್ಯಾತೊಲಿಕ್ ಪಂಥವನ್ನು ಸ್ಥಾಪಿಸಲು ಜೇಮ್ಸ್ ಹಲವಾರು ಕ್ರಮಗಳನ್ನು ಕೈಗೊಂಡ. ಸೈನ್ಯದಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಆಡಳಿತದಲ್ಲಿ ಹಲವಾರು ಕ್ಯಾತೊಲಿಕರನ್ನು ಅಧಿಕಾರಿಗಳನ್ನಾಗಿ ನೇಮಿಸಿದ. ಆಂಗ್ಲಿಕನರನ್ನು ಹಿಂಸಿಸಲು ಯತ್ನಿಸಿದ. 1687ರಲ್ಲಿ ಘೋಷಣೆಯೊಂದನ್ನು ಹೊರಡಿಸಿ, ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್ ಎರಡರ ಮತಗಳ ಭಿನ್ನಮತೀಯರಿಗೂ ವಿರುದ್ಧವಾದ ನ್ಯಾಯವನ್ನು ಜಾರಿಗೆ ತಂದ. 1687ರಲ್ಲಿ ಪಾರ್ಲಿಮೆಂಟನ್ನು ವಿಸರ್ಜಿಸಿದ. 1688ರಲ್ಲಿ ಮತ್ತೆ ಮತೀಯ ಘೋಷಣೆ ಹೊರಡಿಸಿ, ಅದನ್ನು ಚರ್ಚುಗಳಲ್ಲಿ ಪಠಿಸಬೇಕೆಂದು ಆದೇಶ ನೀಡಿದ. ಆದರೆ ಕ್ಯಾಂಟರ್‍ಬರಿಯ ಆರ್ಚ್‍ಬಿಷಪನೂ ಅವನ ಆರು ಮಂದಿ ಬಿಷಪರೂ ದೊರೆಗೆ ಮನವಿ ಸಲ್ಲಿಸಿ, ಆ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಕೇಳಿಕೊಂಡರು. ಆದರೆ ಜೇಮ್ಸ್ ಕೋಪಗೊಂಡು ಆ ಏಳು ಪಾದ್ರಿಗಳನ್ನು ಸೆರೆಹಿಡಿದು ಅವರ ಮೇಲೆ ರಾಜದ್ರೋಹದ ಅಪಾದನೆ ಹೊರಿಸಿ ಅವರನ್ನು ವಿಚಾರಣೆಗೆ ಗುರಿಪಡಿಸಿದ.

	ನ್ಯಾಯಾಲಯದಲ್ಲಿ ಅವರ ವಿಚಾರಣೆ ಪ್ರಾರಂಭವಾದಾಗ ಇಡೀ ರಾಜ್ಯದಲ್ಲೇ ಕೋಲಾಹಲವುಂಟಾಯಿತು. ಜೇಮ್ಸನ ವಿರುದ್ದ ದಂಗೆ ಏಳಲು ಜನರು ಸನ್ನದ್ದರಾದರು. ರಾಜನಿಗೆ ಪುತ್ರೋತ್ಸವವಾಯಿತೆಂಬ ವಾರ್ತೆ ಕೇಳಿದ ಜನ ಜೇಮ್ಸನನ್ನು ಓಡಿಸುವ ನಿರ್ಧಾರಕ್ಕೆ ಬಂದರು. ಪಾದ್ರಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧಿಪತಿಗಳು ಆ ಏಳು ಪಾದ್ರಿಗಳು ನಿರಪರಾಧಿಗಳೆಂದು ಘೋಷಿಸಿದಾಗ ಲಂಡನ್ ನಗರದ ಮತ್ತು ದೇಶದ ಇತರ ಭಾಗಗಳ ನಾಗರಿಕರು ಮೆರವಣಿಗೆ ನಡೆಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಅವರ ಬಿಡುಗಡೆಯಾದ ದಿವಸದ ರಾತ್ರಿಯೇ ರಾಜಧಾನಿಯಲ್ಲಿದ್ದ ಟೋರಿ ಮತ್ತು ಹ್ವಿಗ್ ಪಕ್ಷಗಳ ಏಳು ಮಂದಿ ನಾಯಕರು ಸಭೆ ಸೇರಿ ಜೇಮ್ಸನ ಅಳಿಯನಾದ ಆರೆಂಜಿನ ವಿಲಿಯಮ್‍ಗೆ ಆಮಂತ್ರಣ ಪತ್ರವನ್ನು ಕಳುಹಿಸಿ ಅವನು ಕೂಡಲೇ ಸೈನ್ಯಸಮೇತನಾಗಿ ಇಂಗ್ಲೆಂಡಿಗೆ ಬಂದು ಜೇಮ್ಸ್‍ನನ್ನು ಸೋಲಿಸಿ ರಾಜ್ಯಭಾರವನ್ನು ವಹಿಸಿಕೊಳ್ಳುವಂತೆ ಕೇಳಿಕೊಂಡರು. ವಿಲಿಯಮ್ ಈ ನಾಯಕರ ಮನವಿಗೆ ಒಪ್ಪಿ ಇಂಗ್ಲೆಂಡಿಗೆ ಬಂದಾಗ, ಜೇಮ್ಸನ ಅಚ್ಚುಮಚ್ಚಿನ ಅನುಯಾಯಿಗಳೇ ಅವನನು ತೊರೆದು ವಿಲಿಯಮನ ಕಡೆ ಸೇರಿದರು. ಕೊನೆಗೆ ಅವನ ಮಗಳು ಆ್ಯನ್ ಕೂಡ ಅವನನ್ನು ತ್ಯಜಿಸಿದಳು. ಆದ್ದರಿಂದ ವಿಲಿಯಮನನ್ನು ಎದುರಿಸುವುದಕ್ಕಿಂತ ಪಲಾಯನ ಮಾಡುವುದೇ ಲೇಸು ಎಂದು ತಿಳಿದು ಜೇಮ್ಸ್ ಫ್ರಾನ್ಸಿಗೆ ಓಡಿಹೋದ. ಇಂಗ್ಲೆಂಡಿನ ಪಾರ್ಲಿಮೆಂಟ್ 1689 ಫೆಬ್ರವರಿ 12ರಂದು ಸೇರಿ ಜೇಮ್ಸ್ ಸಿಂಹಾಸನವನ್ನು ತ್ಯಜಿಸಿರುವನೆಂದು ಘೋಷಿಸಿ, ವಿಲಿಯಂ ಮತ್ತು ಮೇರಿಯರು ಅದನ್ನು ಜಂಟಿಯಾಗಿ ವಹಿಸಿಕೊಳ್ಳಬೇಕೆಂದು ಪ್ರಾರ್ಥಿಸಿತು. ಸ್ಕಾಟ್ಲಂಡಿನ ಪಾರ್ಲಿಮೆಂಟೂ ಹಾಗೆಯೇ ಮಾಡಿತು. ಜೇಮ್ಸ್ ಮತ್ತೆ ಸಿಂಹಾಸನವನ್ನು ಸಂಪಾದಿಸಲು ಐರ್ಲೆಂಡಿನಲ್ಲಿ ಬೆಂಬಲ ಪಡೆದು ವಿಲಿಯಮನ ಮೇಲೆ ಯುದ್ಧ ಹೂಡಿದ. ಆದರೆ ವಿಲಿಯಮ್ 1690ರಲ್ಲಿ ಅವನನ್ನು ಬಾಯ್ನ್ ಕದನದಲ್ಲಿ ಸೋಲಿಸಿದ. ರಾಜ್ಯ ಪಡೆಯಲು ಜೇಮ್ಸ್ ಮತ್ತೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅವನು 1701ರಲ್ಲಿ ತೀರಿಕೊಂಡ.

ಜೇಮ್ಸನ ಮಗ 3ನೆಯ ಜೇಮ್ಸ್ ಎಂಬ ಅಭಿಧಾನದಿಂದ ಇಂಗ್ಲೆಂಡಿನ ಸಿಂಹಾಸನವನ್ನು ಪಡೆಯಲು (1688-1766) ಫ್ರಾನ್ಸಿನ ಸಹಾಯ ಪಡೆದು 1708ರಲ್ಲಿ ಪ್ರಯತ್ನಿಸಿದ. ಫ್ರಾನ್ಸಿನ ದೊರೆ 14ನೆಯ ಲೂಯಿ ಅವನನ್ನು ಇಂಗ್ಲೆಂಡಿನ ದೊರೆಯೆಂದು ಅಂಗೀಕರಿಸಿ, ಅವನಿಗೆ ಬೆಂಬಲವಿತ್ತ. ಆದರೆ ಇದು ಫಲಕಾರಿಯಾಗಲಿಲ್ಲ. 1715 ಮತ್ತು 1745ರಲ್ಲಿ ಸಿಂಹಾಸನವನ್ನು ಸಂಪಾದಿಸಲು ಸ್ಕಾಟ್ಲೆಂಡಿನ ಜನರ ಬೆಂಬಲ ಪಡೆದು ಇಂಗ್ಲೆಂಡಿನ ಪ್ರಭುಗಳ ಮೇಲೆ ಯುದ್ಧ ಮಾಡಿದ. ಆದರೆ ಆ ಪ್ರಯತ್ನಗಳೂ ಫಲಿಸಲಿಲ್ಲ.											(ಕೆ.ಟಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ